ಕನ್ನಡಕದಲಿಯೂ ನಾ ಹುಡುಕಿದೆನು ಕನ್ನಡ
ಕನ್ನಡಿಯಲೂ ನಾ ಕಂಡೆ ನನ್ನ ಕನ್ನಡ
ಕಸ್ತೂರಿಯ ಸುಗಂಧ ಬೀರುತಿದೆ ಕನ್ನಡ
ಕಿವಿ ನಿಮಿರುವದು ಉಲಿದರೆ ಕನ್ನಡ
ಎಷ್ಟು ಚೆಂದವಾಗಿದೆ ನನ್ನ ನೆಚ್ಚಿನ ಕನ್ನಡ
ಹೇಗೆ ಗೀಚಿದರು ಅಂದವಾಗಿರುವದು ಈ ನನ್ನ ಕನ್ನಡ
ನನ್ನೆದೆಯದಾಳದಲಿ ಇಳಿದಿಹುದು ಕನ್ನಡ
ನಲಿದು ಕುಣಿಯುವೆನು ನಾನು ನೆನೆಸಿ ನನ್ನ ಕನ್ನಡ
ರಾಯ ನೃಪತುಂಗ ಆಡಿ ಜೋಡಿಸಿದ ಸಿರಿ ಕನ್ನಡ
ಬಸವ ಸರ್ವಜ್ಞರ ವಚನಗಳ ತಿರುಳು ಸಾರುತಿಹ ಕನ್ನಡ
ಕನಕ ಪುರಂದರರ ಭಕ್ತಿಗೀತೆಯ ಹಗಲಿರುಳು ಹಾಡುತಿಹ ಕನ್ನಡ
ಶ್ರೀ ಕೃಷ್ಣದೇವರಾಯನ ವೈಭವ ನೆನೆಯುತಿರುವ ಕನ್ನಡ
ವೀರಶೈವರು, ದಾಸಶ್ರೇಷ್ಠರು ಕೊಂಡಾಡಿದ ಕನ್ನಡ
ವೀರ ವನಿತೆಯರ, ಗಂಡುಗಲಿಗಳ ಶೌರ್ಯ ಹೊಗಳುತಿದೆ ಕನ್ನಡ
ಕನ್ನಡಾಂಬೆಯ ಕಾಲ್ದೊಳೆಯುವ ಕಾವೇರಿಯ ಕನ್ನಡ
ಶ್ರೀ ರಂಗನಾಯಕನ ಪರಾಕು ಹಾಡುವ ಕನ್ನಡ
ಕವಿರತ್ನರು ಬರೆದ, ಗಾನಕೋಕಿಲೆಯರು ಹಾಡಿದ ಕನ್ನಡ
ಪಕ್ಷಿಗಳ ಇಂಚರದಲಿಯೂ ಸೂಸುತಿಹುದು ಸಿಹಿ ಕನ್ನಡ
ನಟಸಾರ್ವಭೌಮ ಮುತ್ತುರಾಜನ ಅಚ್ಚುಮೆಚ್ಚಿನ ಕನ್ನಡ
ಎನ್ನ ತೃಷೆಯನು ನೀಗಿಸಿಹ ಅಮೃತ ಧಾರೆ ಕನ್ನಡ
ಎದೆಗಾಯ್ತು ತಂಪು ನುಡಿದೊಡನೆ ಕನ್ನಡ
ಕಿವಿಗೆಷ್ಟು ಇಂಪು ಕೇಳಿದೊಡನೆ ಕನ್ನಡ
ಎನ್ನ ಕರುನಾಡ ಸಿರಿನುಡಿಯು ಕನ್ನಡ
ಎದೆ ಇರಿದರೂ ನಾ ಬಿಡೆ ನನ್ನ ಕನ್ನಡ
ಸವಿ ಜೇನಿನ ಕೊಡ ನನ್ನಮ್ಮ ಕೊಟ್ಟ ಕನ್ನಡ
ತುಂಬಿದ ಹೊನ್ನಕೊಡ ನಾ ಪಡೆದ ಕನ್ನಡ
ಹೊರನಾಡಿನಲಿದ್ದರೂ ನನ್ನುಸಿರು ಕನ್ನಡ
ಅಚ್ಚಳಿಯದೆ ಹಚ್ಚ ಹಸಿರಾಗಿಹುದು ಇಲ್ಲಿ ಕನ್ನಡ
ನುಂಗಿದರು ಪರನಾಡಿನ ಅನ್ನ ಇಂಗಿಹೋಗದು ಮನದಲ್ಲಿ ಕನ್ನಡ
ಕಣ್ಣಂಚಿನಲಿ ಇಳಿಯಿತು ನೀರ ಹನಿ ನೆನೆದಾಗ ಕನ್ನಡ
ಇನಿಸು ತಿಂದಂತೆ ನಾನಿಲ್ಲಿ ನುಡಿಯಿತಿರುವೆನು ಕನ್ನಡ
ಎಲ್ಲಿದ್ದರೂ ನಾ ಮರೆಯಲಾರೆ ನನ್ನ ತಾಯ್ನುಡಿ ಕನ್ನಡ